ಮಿದುಳು ಜ್ವರ - 
ವಿಷಾಣುಸೋಂಕು ಮತ್ತಿತರ ಕಾರಣಗಳಿಂದ ಮಿದುಳಿನ ಉರಿಊತ ಉಂಟಾಗಿ ಜೊತೆಯಲ್ಲೆ ಜ್ವರವೂ ಬಂದಿರುವ ಸ್ಥಿತಿ (ಎನ್‍ಸಿಫಲೈಟಿಸ್; ಬ್ರೆಯ್ನ್ ಫೀವರ್).

	ಸೋಂಕಿನಿಂದ ಬರುವ ಮಿದುಳುಜ್ವರ ಸಾಮಾನ್ಯವಾಗಿ ಕೂರಾದುದು (ಅಕ್ಯೂಟ್): ಕೆಲವು ಬಗೆಯ ಏಕಾಣುಗಳೂ ಮುಖ್ಯವಾಗಿ ವಿವಿಧ ವೈರಸ್ಸುಗಳೂ ಸಾಧಾರಣವಾಗಿ ಸೊಳ್ಳೆ ಮುಂತಾದ ರಕ್ತಹೀರುವ ಕ್ರಿಮಿಕೀಟಗಳ ಹೆಚ್ಚುವಿಕೆಯಿಂದ ದೇಹವನ್ನು ಪ್ರವೇಶಿಸಿ ರಕ್ತಪರಿಚಲನೆಯ ಮೂಲಕ ಮಿದುಳನ್ನು ಸೇರಿ ಅಲ್ಲಿ ಉರಿಊತವನ್ನು ಉಂಟುಮಾಡುತ್ತವೆ. ಸಾಮಾನ್ಯವಾಗಿ ಜ್ವರವೂ ಬರುತ್ತದೆ. ಜೊತೆಗೆ ತಲೆನೋವು, ಓಕರಿಕೆ, ವಮನ, ಕಣ್ಣುಕತ್ತಲೆ ಬರುವುದು, ಅದಿರುವಾಯು (ಕನ್‍ವಲ್‍ಷನ್) ಸಂವೇದನ ನಾಶ ಮತ್ತು ಮುಖ್ಯವಾಗಿ ರುಂಡಕ್ಕೆ ಸೀಮಿತವಾದ ಪಕ್ಷಾಘಾತ ಇವೂ ಕಾಣಬರುತ್ತವೆ. ಈ ಕೊನೆಸಂದರ್ಭದ ಫಲವಾಗಿ ದ್ವಂದ್ವ ದೃಷ್ಟಿ (ಡಿಪ್ಲೋಪಿಯ), ಮೆಳ್ಳೆಗಣ್ಣು, ದೃಷ್ಟಿ ಚುರುಕುನಾಶ ಇವು ಪರಿಣಮಿಸುತ್ತವೆ,

	ಶಿಶುಗಳಲ್ಲಿ ಹಾಗೂ ಬಾಲಕ ಬಾಲಕಿಯರಲ್ಲಿ ರೋಗ ತೀವ್ರವಾಗಿಯೇ ಕಂಡುಬರುತ್ತದೆ. ಸಾಮಾನ್ಯವಾಗಿ ಒಂದೆರಡು ದಿವಸಗಳಲ್ಲಿ ಸಾವು ಸಂಭವಿಸುತ್ತದೆ. ರೋಗಿಗಳು ಜಡತೆ, ಆಲಸ್ಯ, ಮಂಪರು, ವಾರಗಟ್ಟಲೆ ಜ್ಞಾನತಪ್ಪಿದ ಸ್ಥಿತಿಯಲ್ಲಿ ಮೃತರಾಗುವುದೂ ಉಂಟು. ಬದುಕಿಕೊಂಡರೆ ಬುದ್ಧಿಮಾಂದ್ಯ, ಅಪಸ್ಮಾರ, ಐಚ್ಛಿಕ ಹತೋಟಿನಾಶ ಮುಂತಾದವು ಕಂಡುಬರಬಹುದು. ಕೆಲವು ವಾರಗಳ ತರುವಾಯ ಹಠಾತ್ತಾಗಿ ಸ್ಥಿತಿಗೆಟ್ಟು ಮರಣ ಸಂಭವಿಸುವುದೂ ಇದೆ. ಒಟ್ಟಿನಲ್ಲಿ ರೋಗಿಗಳ ಪೈಕಿ 1/3 ಪಾಲು ವ್ಯಕ್ತಿಗಳು ಮೃತರಾಗುವ ಸಂಭವವಿದೆ. ಬದುಕಿಕೊಂಡ ವ್ಯಕ್ತಿಗಳ ಮಾನಸಿಕ ಕ್ರಿಯೆಯಲ್ಲಿ ಮೂಲಭೂತ ವ್ಯತ್ಯಾಸಗಳು ಕಂಡುಬಂದು ಅವರ ವ್ಯಕ್ತಿತ್ವವೇ ಬದಲಾಗಿಹೋಗುವುದುಂಟು: ಸಾಧು ಸ್ವಭಾವದ ವ್ಯಕ್ತಿ, ಆಗಾಗ್ಗೆ ಕೆರಳಿ ಗಲಾಟೆ ಎಬ್ಬಿಸುವ ಹಾಗೂ ಹಿಂಸಾತ್ಮಕ ವ್ಯಕ್ತಿಯಾಗಿ ಬದಲಾಗಬಹುದು. ಗೌರವಾನ್ವಿತ ಕ್ರಿಯಾವಂತ ವ್ಯಕ್ತಿ ಉಂಡಾಡಿ ಬೀದಿಹೋಕನೊ ಇಲ್ಲವೆ ಕಳ್ಳನೊ ಆಗಬಹುದು.

	ತಲೆ ಮತ್ತು ಕೈನಡುಕ ಕಂಡುಬಂದು ಕ್ರಮೇಣ ಅಲ್ಲಿಯ ಮಾಂಸಗಳ ಸ್ವಾಧೀನ ತಪ್ಪಿ ಮುಖದಲ್ಲಿ ಭಾವನಾಶೂನ್ಯಸ್ಥಿತಿ ಕಂಡುಬರಬಹುದು. ಇಂಥ ಸ್ಥಿತಿಗೆ ಪಾರ್ಕಿನ್ಸನ್ನನ ಲಕ್ಷಣ ಕೂಟ (ಸಿಂಡ್ರೋಮ್) ಅಥವಾ ರೋಗ ಎಂಬ ಹೆಸರೂ ಇದೆ.

	ಈಗ ಸುಮಾರು 1979 ರಿಂದ ಕರ್ನಾಟಕದಲ್ಲಿ ಪಿಡುಗಾಗಿ ಹರಡಿರುವ ಈ ಜ್ವರ ಜಪಾನೀಸ್ ಬಿ ಎನ್‍ಸಿಫಲೈಟಿಸ್ ಎಂಬ ಹೆಸರಿನದು. ಹೆಸರೇ ಹೇಳುವಂತೆ ಇದು ಜಪಾನ್, ಚೀನ ಮತ್ತು ನೆರೆಯ ಮಂಚೂರಿಯ, ರಷ್ಯ ಮುಂತಾದ ಭಾಗಗಳಲ್ಲಿ ಬಹು ಕಾಲದಿಂದ ಇರುವುದು ತಿಳಿದಿದೆ. ಇದು ಭಾರತದಲ್ಲೂ ಇದೆ ಎಂಬುದು ಸುಮಾರು 1955ರಲ್ಲಿ ಕಂಡುಬಂತು. ಅಂದಿನಿಂದ ಭಾರತದ ಕೆಲವು ಪ್ರಾಂತ್ಯಗಳಲ್ಲಿ ಬಿಹಾರ, ಪಶ್ಚಿಮಬಂಗಾಲ, ಉತ್ತರ ಪ್ರದೇಶದ ಪೂರ್ವಭಾಗ, ತಮಿಳುನಾಡು, ಕೇರಳ ಮುಂತಾದೆಡೆ ಆಗೊಮ್ಮೆ ಈಗೊಮ್ಮೆ ಇದು ಸಾಂಕ್ರಾಮಿಕ ರೋಗವಾಗಿ ಪೀಡಿಸಿದೆ. ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗಿರುವ 2-3 ತಿಂಗಳು (ಆಗಸ್ಟ್ - ನವಂಬರ್ ತಿಂಗಳುಗಳು) ಈ ರೋಗ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಪ್ಪದೆ ಪ್ರತಿಯೊಂದು ವರ್ಷವೂ ಕಂಡುಬಂದು ಮುಖ್ಯವಾಗಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇಷ್ಟು ವರ್ಷಗಳಾದರೂ ಹತೋಟಿಗೆ ಬರದೆ ಕಾಡಿಸುತ್ತಿರುವುದರಿಂದ ಇದು ಕರ್ನಾಟಕದಲ್ಲಿ ನೆಲೆನಿಂತು ಬಿಟ್ಟಿರುವಂತಿದೆ.

	ಮಿದುಳುರೋಗ ಮೂಲಭೂತವಾಗಿ ಹಂದಿಗಳ ರೋಗ. ಹಂದಿಯಿಂದ ಹಂದಿಗೆ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಹಂದಿಗಳನ್ನೇ ಒಲವಿನಿಂದ ಕಡಿಯುವ ಸ್ವಭಾವದ ಸೊಳ್ಳೆಗಳು ಅಕಸ್ಮಾತ್ತಾಗಿ ಮನುಷ್ಯರನ್ನು ಕಡಿದಾಗ ಆ ವ್ಯಕ್ತಿಯಲ್ಲಿ ವಿಷಾಣುವಿನ ಸೋಂಕುಂಟಾಗಿ ಅವರಿಗೆ ಮಿದುಳುಜ್ವರ ಬರುತ್ತದೆ. ಈ ಸೊಳ್ಳೆಗಳು ಹೀಗೆಯೇ ಬೇರೆ ಪ್ರಾಣಿಗಳನ್ನು ಕಡಿದಾಗ ಅವುಗಳಲ್ಲಿ ವಿಷಾಣುಗಳು ಊರ್ಜಿತವಾಗುವುದಿಲ್ಲ ಆದ್ದರಿಂದ ಈ ಪ್ರಾಣಿಗಳಿಗೆ ರೋಗ ಬರುವುದಿಲ್ಲ; ಅವು ಈ ರೋಗದ ಆಕರಗಳೂ ಆಗುವುದಿಲ್ಲ. ಬಹುಶಃ ಮನುಷ್ಯರಿಂದ ಮನುಷ್ಯರಿಗೆ ಸೊಳ್ಳೆಕಡಿತದಿಂದ ಈ ರೋಗ ಹರಡುವುದೂ ಇಲ್ಲ.

	ಮಿದುಳು ರೋಗಕ್ಕೆ ಚಿಕಿತ್ಸಕ ಮದ್ದು ಇನ್ನೂ ದೊರೆತಿಲ್ಲ. ಲಾಕ್ಷಣಿಕವಾಗಿಯೇ ರೋಗವನ್ನು ಚಿಕಿತ್ಸಿಸಬೇಕಾಗಿದೆ ಮತ್ತು ಅದು ಅಗತ್ಯವೂ ಹೌದು. ಇಲ್ಲದಿದ್ದರೆ ರೋಗ ಮಾರಕವೇ ಆಗುವ ಸಂಭವ ಹೆಚ್ಚು. ಶಾಮಕಔಷಧಗಳಿಂದ ಜ್ವರ, ಮಿದುಳಿನ ಉರಿಯೂತ, ಅನೈಚ್ಛಿಕ ಚಟುವಟಿಕೆಗಳು ಇತ್ಯಾದಿಗಳನ್ನು ಕಡಿಮೆ ಮಾಡಬೇಕು. ರೋಗ ದೀರ್ಘಕಾಲಿಕದಾಗಿದ್ದಾಗ ಶ್ವಾಸಾಂಗ ಅನ್ನಾಂಗಗಳ ಕ್ರಿಯೆ ಕೆಟ್ಟಿದ್ದರೆ ಅವಕ್ಕೆ ಗಮನ, ಮಲಮೂತ್ರಗಳನ್ನು ಸಕ್ರಮವಾಗಿಟ್ಟಿರುವಿಕೆ, ದೀರ್ಘಕಾಲ ಮಲಗಿಯೇ ಇರಬೇಕಾಗಿರುವುದರಿಂದ ತತ್ಫಲವಾಗಿ ಶಯನವ್ರಣವಾಗದಂತೆ ಎಚ್ಚರ ವಹಿಸುವುದು-ಇವೂ ಅಗತ್ಯ. ಸೊಳ್ಳೆನಿರ್ಮೂಲನ, ಹಂದಿಗಳನ್ನು ಜನವಾಸಸ್ಥಳದಿಂದ ದೂರವಾಗಿಟ್ಟಿರುವಿಕೆ ಹಾಗೂ ರೋಗನಿವಾರಣ ಲಸಿಕೆಯನ್ನು ಚುಚ್ಚುಮದ್ದಾಗಿ ಜನರಿಗೆ ಕೊಡುವುದು ಇತ್ಯಾದಿಗಳು ಈ ದಿಸೆಯಲ್ಲಿ ಯುಕ್ತಕ್ರಮಗಳು.

	ಬೇರೆ ರೋಗಗಳಲ್ಲಿ ಒಂದು ಜಟಿಲತೆಯಾಗಿ ಮಿದುಳುಜ್ವರ ಕಂಡುಬರುವುದೂ ಇದೆ. ಸಂಧಿವಾತ ಜ್ವರ, ಇನ್‍ಫ್ಲೂಯೆಂಜಾ, ರೂಬೆಲ್ಲ, ಡೆಂಗೆ ಜ್ವರ, ದಡಾರ ಸೀತಾಳೆಸಿಡುಬು, ಪೀತಜ್ವರ ಇವುಗಳಲ್ಲಿ ಪ್ರಸಂಗತ್ವೇನ ಮಿದುಳು ಉರಿಯೂ ತಕ್ಕೀದಾಗಿ ಜ್ವರಬರುವುದಿದೆ. ಸಾಮಾನ್ಯವಾಗಿ ಪ್ರಧಾನರೋಗ ಹತೋಟಿಗೆ ಬಂದರೆ ಇಂಥ ಮಿದುಳು ಜ್ವರವೂ ವಾಸಿ ಆಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇಂಥ ಸ್ಥಿತಿಗಳಲ್ಲೂ ಪಕ್ಷಾಘಾತಗಳಂಥ ಪರಿಣಾಮಗಳು ಮಿದುಳು ರೋಗದ ಅವಶೇಷವಾಗಿ ಉಳಿದುಕೊಳ್ಳುವ ಸಂಭವವಿದೆ. ಸಿಡುಬು ರೋಗಕ್ಕಾಗಿ ಮುಂಚೆ ನಿವಾರಣ ಲಸಿಕೆಯನ್ನು ಹಾಕುತ್ತಿದ್ದ (ವ್ಯಾಕ್ಸಿನೇಷನ್) ಕಾಲದಲ್ಲಿ ಅಪರೂಪವಾಗಿ ಕೆಲವರಲ್ಲಿ ಇದರಿಂದ ಮಿದುಳುಜ್ವರ ಉಂಟಾಗಿ ಮಾರಕವು ಆಗುತ್ತಿತ್ತು.	  
                         (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ